‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ, ಶಿವಮೊಗ್ಗ.
    ‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’ ಎಂಬಂತೆ ರಮ್ಯ - ಭವ್ಯ ಪ್ರಕೃತಿಯೈಸಿರಿಯ ಮಡಿಲಿನಲ್ಲಿ ಮೈದೋರಿ ನಿಂತಿರುವ ಜಗನ್ಮಾತೆಯೇ ಈ ಜೇನುಕಲ್ಲಮ್ಮ...!
    ‘ಜೇನು + ಕಲ್ಲು + ಅಮ್ಮ’ ಎಂಬಮೂರು ವಿಭಿನ್ನ - ವಿಶಿಷ್ಟ ಶಬ್ಧಾರ್ಥಗಳ ಸಂಗಮ ಈ ಮಹಾಮಾತೆ.ಅಂದರೆ ಕಡಿದಾದ ಕಲ್ಲಿನಬೆಟ್ಟ, ಅದರ ತುಂಬಾ ಅಲ್ಲಲ್ಲಿ ಕಟ್ಟಿರುವ ಹೆಜ್ಜೇನುಗಳ ಮೊತ್ತ, ಮಧ್ಯೆ ವಿರಾಜಮಾನಳಾಗಿದ್ದಾಳೆ ಈ ಅಮ್ಮ... ಅದಕ್ಕೇ ಮಲೆನಾಡಿನ ಮಕ್ಕಳ ಬಾಯಲ್ಲಿ ಈಕೆ ಜೇನುಕಲ್ಲಮ್ಮ...!
    ಇಡೀ ಹೊಸನಗರ ತಾಲ್ಲೂಕಿಗೆ ಅಂದರೆ ಮಲೆನಾಡಿನ ಹೃದಯ ಭಾಗಕ್ಕೆ ಈಕೆಯೇ ಕುಲದೈವ. ಅದರಲ್ಲಿಯೂ ಹುಂಚಾ ಹೋಬಳಿಯ ಹುಂಚಾ, ಸೊನಲೆ, ಕೋಡೂರು, ನಾಗರಕೂಡಿಗೆ, ಇಟ್ಟಕ್ಕಿ, ಹೊಸನಗರ, ಕೊಳಗಿ, ವಾರಂಬಳ್ಳಿ, ಎರಗಿ, ಕುಂಭತ್ತಿ.ಜೇನಿ-ಚಿಕ್ಕಜೇನಿ, ಮೇಲಿನಸಂಪಳ್ಳಿ, ಕಾಳಿಕಾಪುರ, ಬೆಣ್ಣಕ್ಕಿ, ಮಾವಿನಕಟ್ಟೆ, ಮುಂಬಾರು ಹೀಗೆ ಹತ್ತು ಹಲವಾರು ಹಳ್ಳಿಗಳಲ್ಲಿ ವಾಸಿಸುವ ಬಹುಸಂಖ್ಯಾತರಾದ ‘ದೀವರ’ ಜನಾಂಗಕ್ಕೆ ಈಕೆಯೇ ಹಡೆದಮ್ಮನೆಂದರೆ ಅತಿಶಯೋಕ್ತಿಯಲ್ಲ. ನಾವೆಲ್ಲಾ ಜೇನುಕಲ್ಲಮ್ಮ ತಾಯಿಯ ಒಕ್ಕಲು ಮಕ್ಕಳು ಎಂದು ಹೇಳಿಕೊಳ್ಳುವುದರಲ್ಲಿಯೇ ಅದೆಂಥದೋ ಸಂಭ್ರಮವಿದೆ ಅವರಲ್ಲಿ.  
    ಅದಕ್ಕೆಂದೇ ತಾವು ಬೆಳೆದ ಅಕ್ಕಿ, ಬಾಳೆಗೊನೆ, ಶುಂಠಿಯಿಂದ ಹಿಡಿದು ಎಲ್ಲವನ್ನೂ ಪ್ರೀತಿಯಿಂದ ಈ ತಾಯಿಗೆ ಅರ್ಪಿಸಿದ ಮೇಲೆಯೇ ಅದರ ಉಪಯೋಗ ಅಥವಾ ಮಾರಾಟ. ಒಂದುವೇಳೆ ಸಕಾಲದಲ್ಲಿ ದೇವಿಗೆ ತಲುಪಿಸಲು ಸಾಧ್ಯವಾಗದಿದ್ದಲ್ಲಿ ಈ ಅಮ್ಮನಿಗೆಂದೇ ಮುಡಿಪಿನಂತೆ ತೆಗೆದಿರಿಸಿ ಮುಂದೆ ಅವಕಾಶವಾದಾಗ ಒಪ್ಪಿಸಿ ಬರುವ ರೂಢಿಯೂ ಇದೆ.
    ಹಾಲು, ತುಪ್ಪ, ಬೆಣ್ಣೆಯೆಂದರೆ ಈ ದೇವಿಗೆ ಬಹುಪ್ರಿಯ, ಆದ್ದರಿಂದ ಭಕ್ತರು ತಮ್ಮ ಮನೆಯಿಂದ ಮುದ್ದೆಬೆಣ್ಣೆಯನ್ನು ತಂದು ದೇವಿಯ ಶಿಲಾಭಿತ್ತಿಗೆ ಒತ್ತಿ ತೃಪ್ತಿಪಡುತ್ತಾರೆ...!
    ಜಾನುವಾರುಗಳಿಗೆ ಯಾವುದೇ ಕಷ್ಟ ಬಂದರೂ ಈ ದೇವಿಯದೇ ರಕ್ಷಣೆ. ಒಂದು ಹರಕೆಮಾಡಿಕೊಂಡರೆ ಎಲ್ಲಾ ಬಗೆಯ ಸಮಸ್ಯೆಗಳೂ ದಿಢೀರನೆ ಮಾಯವಾಗುತ್ತದೆ ಎಂಬ ನಂಬುಗೆ ಇವರದು...!
    ಹೊಸದಾಗಿ ಮದುವೆಯಾದ ಜೋಡಿಗಳಂತೂ ಕಡ್ಡಾಯವಾಗಿ ಅಮ್ಮನ ದರುಶನವನ್ನು ಪಡೆಯಲೇಬೇಕೆಂಬ ನಿಯಮ ದೀವರ ಜನಾಂಗದ ನಂಬಿಕೆಯಾಗಿದೆ.ಸಹಜವಾಗಿಯೇ ರಮ್ಯ ಸುಂದರ ಪ್ರಕೃತಿತಣವಾದ್ದರಿಂದ ಈಗಂತೂ ಎಲ್ಲಾ ಜನಾಂಗದ ಜೋಡಿಗಳು ಇಲ್ಲಿಗೆ ಬಂದು ದೇವಿಯ ಆಶೀರ್ವಾದವನ್ನು ಪಡೆದು ಸುಂದರ ಪರಿಸರ ಸ್ವರ್ಗದ ಸವಿ ಸವಿಯುತ್ತಾರೆ.
    ಜನರ ವಿವಿಧ ಕಾಯಿಲೆಗಳಿಗೂ ದೇವಿಯ ಅನುಗ್ರಹವೇ ಸಿದ್ಧೌಷದ ಎಂದರೆ ಹೆಚ್ಚುಗಾರಿಕೆಯೇನಲ್ಲ. ಕಜ್ಜಿ – ಕುರಗಳಂತಹ ಸಾಮಾನ್ಯ ರೋಗಗಳಿಂದ ಹಿಡಿದು, ಇಂದಿನ ಆಧುನಿಕ ಪ್ರಾಣಾಹಾರಕ ಪೀಡೆಗಳೂ ಸಹಾ ಈ ಅಮ್ಮನ ಆಶೀರ್ವಾದ ಬಲದಿಂದ ಹೇಳಹೆಸರಿಲ್ಲದಂಥಾಗುತ್ತವೆ. ಅದಕ್ಕೆ ಸಾಕಷ್ಟು ಪುರಾವೆಗಳೂ ಇವೆ.
    ಅಡಿಕೆ ಹಿಂಗಾರ ಅಮ್ಮನ ಮೆಚ್ಚಿನ ಪುಷ್ಪ. ಸದಾ ಮೀಸಲನ್ನೇ ಬಯಸುವ ಈ ಅಮ್ಮನನಿಗೆ ದುಂಬಿ ಸಹಾ ಮುಟ್ಟದ ಹಿಂಗಾರದ ಅರ್ಪಣೆ ಬಹುಪ್ರಿಯವಂತೆ...!!
    ಮದುವೆಗಾಗಿ ಗಂಡು ಹೆಣ್ಣಿನ ಜಾತಕ ಅಥವಾ ತಾರಾಬಲನೋಡಿ ಸಿಷ್ಕರ್ಶಿಸುವುದು ರೂಢಿ. ಆದರೆ ಈ ಅಮ್ಮನ ಭಕ್ತರು ಅದರಲ್ಲಿಯೂ ದೀವರು ಮಾತ್ರ ಅದೆಷ್ಟೇ ಜಾತಕಫಲ ಕೂಡಲಿ, ತಾರಾಬಲ ಹೊಂದಲಿ, ಇಲ್ಲಿ ಪ್ರಸಾದ ತೆಗೆಸದೆ ಮದುವೆ ನಡೆಸುವುದೇ ಅಪರೂಪ.
    ಸಂಪ್ರೀತಳಾದ ದೇವಿ ಪಡೆಯುವ ಹರಕೆಯಲ್ಲಿಯೂ ಹತ್ತುಹಲವು ವೈವಿಧ್ಯಗಳಿವೆ. ಬೆಳ್ಳಿ, ದನ-ಕರ, ಬೆಣ್ಣೆ ಒಪ್ಪಿಸುವುದು ಉಡಿ ತುಂಬುವುದು, ಬೆಳ್ಳಿ ತೊಟ್ಟಿಲಲ್ಲಿ ಚಿನ್ನದ ಮಗು ಒಪ್ಪಿಸುವುದು... ಹೀಗೆ ನೂರಾರು ವಿಧಗಳಿವೆ.
    ಸದಾ ಶುಚಿತ್ವ, ಮೀಸಲನ್ನು ಇಷ್ಟಪಡುವ ಈ ದೇವಿ ಯಾವುದೇ ತರಹದ ಅಶುಚಿ, ಮುಟ್ಟು-ಮೈಲಿಗೆಯನ್ನು ಸಹಿಸಳು. ಆದರೆ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆಯುಂಟು. ತಿಳಿದೂ ಮಾಡಿದರೆ ಮಾತ್ರ ಶಿಕ್ಷೆ ಕಟ್ಟಿಟ್ಟ ಬುತ್ತಿ.
    ಮೈಲಿಗೆಯಿಂದ ಅಮ್ಮನದೇವಾಲಯದ ಸನಿಹ ಸುಳಿದರೆ ಸಾಕು, ಸಾವಿರಾರು ಜೇನ್ನೊಣಗಳು ಮುತ್ತಿಕೊಂಡು ಕಚ್ಚತೊಡಗುತ್ತವೆ. ಆದರೆ ಅವರ ಮಧ್ಯದಲ್ಲೇ ಇರುವ ತಪ್ಪಿಲ್ಲದಭಕ್ತರನ್ನು ಅವುಮುಟ್ಟುವುದೇ ಇಲ್ಲ ಎಂಬುದು ನಂಬಲು ಕಷ್ಟ ಸಾಧ್ಯವಾದರೂ ಸತ್ಯಸ್ಯ ಸತ್ಯ.
    ಇಂದು ಸರ್ಕಾರದ ವಿವಿಧ ಅನುದಾನಗಳಡಿಯಲ್ಲಿ ಸುಮಾರಾದ ರಸ್ತೆ ನಿರ್ಮಾಣವಾಗಿದೆ. ಬೈಕುಗಳು ಮಾತ್ರವಲ್ಲದೇ, ಮಧ್ಯಮ ಗಾತ್ರದ ವಾಹನಗಳೂ ಸಹಾ ದೇವಾಲಯದ ಆವರಣಕ್ಕೆ ಬರಲು ಸುಲಭ ವಾಗಿದೆ.
    ಅಮ್ಮನಘಟ್ಟಕ್ಕೆ ಹೋಗುವುದೆಂದರೆ ಅದುಪೂರಾ ಒಂದು ದಿನದ ಯಾತ್ರೆಯಾಗಿತ್ತು. ಬೆಳಬೆಳಿಗ್ಗೆ ಸ್ನಾನಮಾಡಿ ಮೀಸಲುಟ್ಟು, ಮೀಸಲಿನಿಂದಲೇ ಕಟ್ಟಿದ ಬುತ್ತಿಗಂಟು, ರೊಟ್ಟಿ ಚಟ್ನಿಗಳ ಗಂಟು ಹೊತ್ತು, ಸಹಭಕ್ತರೊಂದಿಗೆ ಹರಟುತ್ತಾ ಚುಮುಚುಮುರಮಿಸುತ್ತಿರುವ ರವಿಯಕಿರಣಗಳ ಹೊನ್ನಮಳೆಯಲ್ಲಿ ತೋಯುತ್ತಾ ಬೆಟ್ಟ ಹತ್ತುವ ಪರಿ ಬಹು ಆಪ್ಯಾಯವಾಗಿತ್ತು.
    ಬಲಭಾಗದಲ್ಲಿ ದಟ್ಟಹಸಿರು ಕಾಡು-ಬೆಟ್ಟ, ಎಡಭಾಗದಲ್ಲಿ ಹಸಿರು ಮುರಿಯುವ ಪ್ರಪಾತ, ಅದರಾಚೆ ಆಕಾಶವನ್ನೇ ಎತ್ತಿಬಿಡಲೋ ಎಂಬಂತೆ ಎದ್ದು ನಿಂತ ಭದ್ರಾಕಾರದ ಪರ್ವತ, ಮುಸುಕಿದ ಇಬ್ಬನಿಯ ಮಂಜು, ಹಕ್ಕಿಗಳ ಚಿಲಿಪಿಲಿ ನಾದ, ಕಚಗುಳಿ ಇಡುವ ತಂಗಾಳಿ... ಆಸೊಬಗು ವರ್ಣಿಸಲಸದಳವೇ ಸರಿ.
    ಪೂಜೆಯ ನಂತರ ಎಲ್ಲರೂ ತಮಗೆ ಬೇಕೆನಿಸಿದಲ್ಲಿ ಬೆಟ್ಟದ ಹಸಿರಿನ ಮಧ್ಯೆ ಕಲ್ಲಿನ ಮೇಲೆ ಕುಳಿತು, ರೊಟ್ಟಿ-ಬುತ್ತಿ ತಿನ್ನುವ ಆರುಚಿ ಇಂದಿಗೂ ಮನದಾಳದಲ್ಲಿ ಮರೆಯದೇ ಉಳಿದಿದೆ.
    ಮನೆಯಿಂದ ಅಮ್ಮನಘಟ್ಟಕ್ಕೆ ಹೊರಟವರು ವಾಪಾಸ್ಸು ಬರುವವರೆಗೂ ಮನೆಯಲ್ಲಿ ಯಾರೂ ಊಟ-ತಿಂಡಿಯನ್ನು ಎಂಜಲು ಮಾಡುವಂತಿರಲಿಲ್ಲ. ಹೋದವರು ಮರಳಿಬಂದು, ಅವರು ತಂದ ರೊಟ್ಟಿ-ಬುತ್ತಿಯ ಪ್ರಸಾದವನ್ನು ತಿಂದ ಮೇಲೆಯೇ ಅವರ ಊಟಕ್ಕೆ ಅವಕಾಶವಿತ್ತು.
ಪರಿಸರ
    ಮೂಲತಃ ಪ್ರಕೃತಿ ದೇವತೆಯಾದ ಜೇನುಕಲ್ಲಮ್ಮನದು ಅನ್ವರ್ಥನಾಮ. ಈ ತಾಯಿ ಜಗನ್ಮಾಥೆ, ಆದಿಮಾತೆ, ನಿರಾಕಾರ ಭಗವಂತನ ಪ್ರಕೃತಿಮಯ ಸಾಕಾರರೂಪ ಇವಳದು.
    ಜಗನ್ಮಾಥೆಯ ಶಕ್ತಿ ಸಂಚಯನಗೊಂಡು ಈ ಪುಣ್ಯಸ್ಥಳವಾದ ಅಮ್ಮನಘಟ್ಟ ಇರುವುದು ಚಿತ್ತಾಕರ್ಷಕ ಮಲೆನಾಡಿನ ಪ್ರಕೃತಿ ಐಸಿರಿಯ ನಡುವೆ. ನಾಲ್ಕೂ ದಿಕ್ಕಿನಲ್ಲಿ ಕೋಣನಮನೆ ಗುಡ್ಡ, ಹಳೆ ಅಮ್ಮನಘಟ್ಟ, ಕೋಡೂರು ಘಟ್ಟ ಮತ್ತು ಕಾಗಿ ಘಟ್ಟಗಳು ಸುತ್ತುವರೆದಿವೆ.
    ಅಮ್ಮನ ಈ ಮನೆ ಗಿಡಮೂಲಿಕೆಗಳ ತವರೂ ಹೌದು. ಹತ್ತು ಹಲವು ನದಿಗಳ, ಮಲೆನಾಡಿನ ದಟ್ಟ ಅಡವಿಯ, ಜೀವಿ ವೈವಿಧ್ಯಗಳ ನೆಲೆ ಮನೆಯೂ ಹೌದು.

Sri Jenukallamma Temple, Ammanagatta, Koduru, Hosanagara.
Copyright 2021 www.jenukallamma.com  Inc. All Rights Reserved.
Designed by Invance Infotech, Shimoga.
  ನೂತನ ದೇವಾಲಯದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ