‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
    ಈ ಅಮ್ಮನಘಟ್ಟದ ದೇವಿಯ ಹಿನ್ನೆಲೆಯಲ್ಲಿ ರೋಚಕವಾದ ಐತಿಹ್ಯಗಳಿವೆ. ಮಲೆನಾಡಿನ ರೈತಕುಟುಂಬಗಳು ಅದ್ರಲ್ಲೂ ವಿಶೇಷವಾಗಿ ಕಾಡಿನ ನಡುವೆ ಗುಡಿಸಲನ್ನು ಕಟ್ಟಿಕೊಂಡು ಬೇಟೆಯಾಡಿ ಬದುಕುಸಾಗಿಸುತ್ತಾ, ಬೈನೆ ಕಳ್ಳು ಮಾರಿ ಜೀವನ ನಿರ್ವಹಣೆಮಾಡುತ್ತಿದ್ದ ಇಲ್ಲಿನ ಮೂಲ ನಿವಾಸಿಗಳಾದ ದೀವರ ಆರಾಧ್ಯ ಧೈವವಾಗಿ ಸಾವಿರಾರು ವರ್ಷಗಳಿಂದಲೂ ಪೂಜೆಗೊಳ್ಳುತ್ತಾ ಬಂದಿರುವುದಕ್ಕೆ ಅನೇಕ ಮೌಖಿಕ ಮತ್ತು ನಂಬುಗೆಯ ದಾಖಲೆಗಳಿವೆ. ಅಂತೆಯೇ ಇದರ ಹಿಂದೆ ಅನೇಕ ರೋಚಕ ಕಥೆಗಳೂ ಇವೆ.
ಹೊಸ ಅಮ್ಮನಘಟ್ಟ
    ಈ ಬೆಟ್ಟ ಪ್ರಸ್ತುತ ಅಮ್ಮ ನೆಲೆಸಿರುವ ಪ್ರದೇಶ. ಇದಕ್ಕೂ ಮೊದಲು ಈ ಅಮ್ಮ ಅನತಿದೂರದಲ್ಲಿ ಆಕಾಶದತ್ತ ಮೊಗಮಾಡಿ ನಿಂತ ಹಳೇ ಅಮ್ಮನಘಟ್ಟದಲ್ಲಿ ನೆಲೆಸಿದ್ದಳಂತೆ. ಅಲ್ಲಿ ದೇವಿಯ ಪೂಜೆಯ ಕುರುಹುಗಳು ಈಗಲೂ ಸಾಕಷ್ಟು ಸಿಗುತ್ತವೆ.
    ಹಾಲಕ್ಕಿ ಜನಾಂಗವೊಂದು ಅಮ್ಮನ ನಿಯಮವನ್ನು ಮೀರಿ ಸ್ವೇಚ್ಚಾಚಾರವಾಗಿ ವರ್ತಿಸಿ ಮೈಲಿಗೆಮಾಡಿದ್ದರಿಂದ ನೊಂದ ಈ ತಾಯಿ ತನ್ನ ಮನೆಯನ್ನೇ ತೊರೆದು ಹೊಸ ಅಮ್ಮನಘಟ್ಟಕ್ಕೆ ಕಲ್ಲಿನ ತೇರಿನಲ್ಲಿ ಧಾವಿಸಿ ಬಂದು ಇಲ್ಲಿ ದೇವಿ ನೆಲೆಸಿದ ಕಥೆ ಮುಗ್ಧ ದೀವರ ಅಜ್ಜಿಯರ ಬಾಯಲ್ಲಿ ಎಳೆ ಎಳೆಯಾಗಿ ಹರಿದು ಬರುವಾಗ ಮೈಮನ ಪುಳಕವಾಗುತ್ತದೆ.
    ಆಕೆಯ ಕಲ್ಲಿನ ರಥದ ಚಕ್ರ ಹರಿದು ಗುರುತಾದ ಮಾರ್ಗ ಈಗಲೂ ಹೊಸ ಅಮ್ಮನಘಟ್ಟದ ಬಂಡೆಗಳ ಮೇಲೆ ಮೂಡಿ ನಿಂತಿದೆ. ಮಾತ್ರವಲ್ಲ ತನ್ನ ನಿಯಮ ಮೀರಿದ ಹಾಲಕ್ಕಿಗಳು ಅಮ್ಮನ ಕೋಪದಿಂದ ಕಲ್ಲಾಗಿ ಹೋದರಂತೆ, ಅದನ್ನು ಈಗಲೂ ಕಾಣಬಹುದು.
ಐತಿಹ್ಯಗಳು
    ಈ ಜಗನ್ಮಾತೆ ಹುಲಿ ವಾಹನಳಾಗಿದ್ದಳಂತೆ.! ಆಕೆಯ ವಾಹನವಾದ ಹುಲಿ ಇಲ್ಲಿನ ಗುಹೆಯೊಂದರಲ್ಲಿ ಈಗಲೂ ವಾಸವಾಗಿದೆಯಂತೆ. ಅದನ್ನು ಹುಲಿ ಗವಿ ಎಂದು ಗುರುತಿಸಲಾಗುತ್ತಿದೆ. ಆಗಾಗ ಬೆಟ್ಟದ ಮೇಲಿಂದ ಹುಲಿಯ ಗರ್ಜನೆ ಕೇಳಿಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಬೇಟೆಯ ಕಥೆ
    ಪ್ರಕೃತಿಯ ಮಡಿಲಲ್ಲಿ ನಿರಾಕಾರ ಶಕ್ತಿಯಾಗಿದ್ದ ದೇವಿಯನ್ನು ಸಾಕಾರವಾಗಿ ಪೂಜಿಸಲು ತೊಡಗಿದ ಕಾರಣಿಕ ಪ್ರಸಂಗವೊಂದಿದೆ.
    ಸಾವಿರಾರು ವರ್ಷಗಳ ಹಿಂದೆ ನಿರ್ಜನವಾಗಿದ್ದ ಈ ಪ್ರದೇಶದಲ್ಲಿ ದೀವರ ಜನಾಂಗದ ಬೇಟೆಗಾರನೊಬ್ಬ ಕಾಡು ಹಂದಿಯೊಂದನ್ನು ಶಿಕಾರಿ ಮಾಡಿದನಂತೆ (ದೀವ ಎಂಬ ಪದಕ್ಕೆ ಬೇಟೆಗಾರ ಎಂಬ ಅರ್ಥವೂ ಇದೆ) ಆತನ ಬಾಣದ ಏಟು ತಿಂದು ರಕ್ತಸುರಿಸುತ್ತಾ ಓಡಿ ಬಂದ ಆ ಪ್ರಾಣಿ ಅಮ್ಮನ ಸನ್ನಿಧಾನದಲ್ಲಿ ಬಂದು ಬಿದ್ದು ಅಸುನೀಗಿತಂತೆ. ಅದನ್ನು ಮುಟ್ಟಲು ಹೋದ ಬೇಟೆಗಾರನನ್ನು ಕೋಟ್ಯಂತರ ಜೇನುಹುಳುಗಳು ಬಂದು ತಡೆದವಂತೆ. ಸಂಜೆಯವರೆಗೆ ಮರೆಯಲ್ಲಿ ನಿಂತು ಕಾದ ಆ ಬೇಟೆಗಾರ ಕತ್ತಲಾಗಿ ಜೇನುಹುಳುಗಳು ಮರೆಯಾದಾಗ ಪುನಃ ಅಲ್ಲಿಗೆ ಬಂದನಂತೆ. ಆಗ ಅಲ್ಲಿ ಬೃಹದಾಕಾರವಾದ ಪಟ್ಟೆ ಹುಲಿಯೊಂದು ಸೌಮ್ಯವಾಗಿ ನಿಂತು ಇವನನ್ನೇ ನೋಡುತ್ತಿತ್ತಂತೆ. ಆದರೆ ಅದು ಅವನ ಮೇಲೆರಗಲಿಲ್ಲವಂತೆ. ಭಯಭೀತನಾದ ಆತ ಮನೆಗೆ ಓಡಿ ಹೋಗಿ ಪುನಃ ಮರುದಿನ ಬೆಳಿಗ್ಗೆ ತನ್ನ ಸಹಚರರೊಂದಿಗೆ ಅಲ್ಲಿಗೆ ಬಂದು ನೋಡುವಾಗ ಜೇನುಹುಳುಗಳಾಗಲಿ, ಹುಲಿಯಾಗಲಿ ಅಲ್ಲಿರಲಿಲ್ಲವಂತೆ ಹಾಗೂ ಸತ್ತ ಪ್ರಾಣಿಯ ಕುರುಹೂ ಇರಲಿಲ್ಲವಂತೆ! ಬದಲಿಗೆ ವಿಚಿತ್ರವಾದ ಸುಗಂಧವನ್ನು ಸೂಸುವ ಅದಾವುದೇ ಹೆಸರಿಲ್ಲದ ಹೂವುಗಳ ರಾಶಿಯೊಂದು ಅಲ್ಲಿತ್ತಂತೆ.! ಮಂತ್ರಮುಗ್ಧರಾದ ಬೇಟೆಗಾರರು ಆಸ್ಥಳಮಹಾತ್ಮೆಗೆ ಭಕ್ತಿಯಿಂದ ಮಣಿದು ಮಂಡಿಯೂರಿ ಕುಳಿತಾಗ ಎಲ್ಲಿಂದಲೋ ಮೆಲುದನಿಯಲ್ಲಿ ಮಂಗಳ ವಾದ್ಯಗಳ ನಿನಾದ ಕೇಳಿ ಬಂದಿತಂತೆ..!
    ಹೀಗೆ ಆ ಸ್ಥಳದ ಮಹಾತ್ಮೆಯನ್ನರಿತ ಆ ದೀವರ ಜನಾಂಗ ಅಲ್ಲಿಯೇ ತಮ್ಮ ಕುಲದೈವ ಮತೃದೇವತೆ ಅಮ್ಮ ನೆಲೆಸಿದ್ದಾಳೆ ಎಂದು ಭಾವಿಸಿ ಪೂಜಿಸತೊಡಗಿದರಂತೆ. ಮುಂದಿನ ದಿನಗಳಲ್ಲಿ ಆ ಕಾಡು ಜನಾಂಗದವರು ಪೂಜೆಯ ವಿಧಾನವನ್ನರಿತ ನಿಷ್ಠಾವಂತ ಬ್ರಾಹ್ಮಣರೊಬ್ಬರನ್ನು ಆತಾಯಿಯ ಸೇವೆಗೆ ನೇಮಕಮಾಡಿದರಂತೆ.
    ಪ್ರತೀ ವರ್ಷವೂ ತಾವು ಬೆಳೆಯುವ ದವಸ ಧಾನ್ಯಗಳು, ವಿವಿಧ ಹಣ್ಣು ಹಂಪಲುಗಳನ್ನು ದೇವಿಗೆ ಅರ್ಪಿಸುವ ಪರಿಪಾಠವಿದ್ದು ಅದರಿಂದ ಆ ಅರ್ಚಕರ ಜೀವನೋಪಾಯ ಸಹ ಸಾಗುತ್ತಿತ್ತಂತೆ.
ಹೆಸರಿಲ್ಲದ ಹೆಸರೊಲ್ಲದ ಆ ಮಹಾಮಾತೆಗೆ ಈ ಕಾಡು ಜನರೆಲ್ಲಸೇರಿ ಜೇನುತುಂಬಿದ ಕಲ್ಲಿನಲ್ಲಿ ನೆಲೆಸಿದ ತಾಯಿ ಜೇನು-ಕಲ್ಲಮ್ಮ ಎಂದೇ ಕರೆಯತೊಡಗಿದರಂತೆ.!
    ಹೀಗೆ ಕಲ್ಪಾಂತರಗಳಿಂದ ಪೂಜೆಗೊಳಗಾಗುತ್ತಿರುವ ಮಲೆನಾಡಿನ ಆಧಿದೇವತೆ ಜೇನುಕಲ್ಲಮ್ಮನ ಶಕ್ತಿ ಮತ್ತು ಜನತೆಯ ಭಕ್ತಿ ಅನೂಚಾನವಾಗಿ ಅದೇ ಹೆಸರಿನಲ್ಲಿ ನಡೆದುಕೊಂಡುಬರುತ್ತಿದೆ.
ದೇವಿಯ ವಿಗ್ರಹ ರೂಪ
ಭೋವಿ ಜನಾಂಗ ಮತ್ತು ರೇಣುಕಾ ದುರ್ಗಾಪರಮೇಶ್ವರಿ:
    ಅಮ್ಮನಘಟ್ಟದ ಜಗನ್ಮಾತೆಯ ಜೊತೆಗೆ ರೇಣುಕಾ ದೇವಿಯ ಹೆಸರೂ ತಳುಕುಹಾಕಿಕೊಂಡಿದ್ದು, ಅದರ ಹಿಂದೆ ಸಹಾ ಒಂದು ಕಥೆ ಇದೆ.
    ಮಲೆನಾಡಿನ ಈ ಭಾಗದಲ್ಲಿ ಅಲ್ಪ ಸಂಖ್ಯಾತರಾದ ಭೋವಿ ಜನಾಂಗವೊಂದು ವಾಸಿಸುತ್ತಿತ್ತಂತೆ. ದೇವರಲ್ಲಿ ಭಯ-ಭಕ್ತಿ ಈ ಜನಾಂಗದ ಸಹಜಗುಣವಾಗಿತ್ತು. ಇವರ ನಾಯಕನಿಗೆ ಭೂಮಿಯಲ್ಲಿ ಅಕಸ್ಮಾತ್ತಾಗಿ ದುರ್ಗಾಪರಮೇಶ್ವರಿಯ ವಿಗ್ರಹವೊಂದು ದೊರೆಯಿತಂತೆ. ಅದನ್ನವರು ತಮ್ಮ ಮನೆತನದ ದೈವವಾದ ರೇಣುಕಾದುರ್ಗಾಪರಮೇಶ್ವರಿ ಎಂದೇ ಕರೆಯುತ್ತಾ ಮನೆಯಲ್ಲಿಟ್ಟು ಪೂಜಿಸಿದರಂತೆ.
    ಆದರೆ, ಆ ವಿಗ್ರಹ ದೊರೆತ ಮೇಲೆ ಆ ಮನೆತನದಲ್ಲಿ ಸಾಕಷ್ಟು ಕಷ್ಟ ಕಾರ್ಪಣ್ಯಗಳು, ಸಾವು ನೋವುಗಳು ಹೆಚ್ಚಾದವಂತೆ. ಈ ಬಗ್ಗೆ ಮನೆಯ ಯಜಮಾನ ಜ್ಯೋತಿಷಿಗಳಲ್ಲಿ ಅಷ್ಟಮಂಗಲ ಪ್ರಶ್ನೆ ಮಾಡಿದಾಗ ಅವರು ನಿನ್ನ ಮನೆಯಲ್ಲಿರುವ ರೇಣುಕಾದುರ್ಗಾಪರಮೇಶ್ವರಿ ವಿಗ್ರಹ ಹಿಂದೆ ದೇವಾಲಯವೊಂದರಲ್ಲಿದ್ದು ಬ್ರಾಹ್ಮಣೋತ್ತಮರಿಂದ ಪೂಜೆಗೊಳಗಾಗುತ್ತಿತ್ತು. ಆದ್ದರಿಂದ ಇಂದು ಶೂದ್ರನಾದ ನಿನ್ನ ಮನೆಯಲ್ಲಿ ಆ ದೇವಿ ಇರಬಯಸುವುದಿಲ್ಲ. ನಿನ್ನ ಕಷ್ಟ ಕಾರ್ಪಣ್ಯಗಳು ನಿಲ್ಲಬೇಕಾದರೆ ನೀನು ಈ ಕೂಡಲೇ ಈ ವಿಗ್ರಹವನ್ನು ಯಾವುದಾದರೂ ಶಕ್ತಿ ಸ್ಥಳವೊಂದಕ್ಕೆ ಕಾಣುಕೆಯಾಗಿ ನೀಡಿ ಮುಂಬರಲಿರುವ ತಲೆದಂಡದಿಂದ ಪಾರಾಗು..!! ಎಂದು ಸೂಚಿಸಿದರಂತೆ.
    ಗುರುಗಳ ಮಾತನ್ನು ಶಿರಸಾವಹಿಸಿದ ಆ ಬೋವಿಮುಖಂಡ ಆ ವಿಗ್ರಹವನ್ನು ಜಗನ್ಮಾತೆಯ ಸ್ವರೂಪಳಾದ ಜೇನುಕಲ್ಲಮ್ಮನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಒಪ್ಪಿಸಿದನಂತೆ.
    ಅಂದಿನಿಂದ ಪ್ರಕೃತಿ ಸ್ವರೂಪಿಯಾಗಿ ಗುಹೆಯಲ್ಲಿ ನೆಲೆಸಿದ್ದ ಜೇನುಕಲ್ಲಮ್ಮನನ್ನು ವಿಗ್ರಹರೂಪದಲ್ಲಿ ಆರಾಧಿಸಲು ಆರಂಭವಾಯಿತು ಎಂದು ಪ್ರತೀತಿ ಇದೆ.
ಭೂತದಕಥೆ
    ಜೇನುಕಲ್ಲಮ್ಮನ ಸನ್ನಿಧಿಯಲ್ಲಿ ಸಹಸ್ರಾರು ಗಣಗಳ ಭೂತಗಳು ಹಾಗೂ ಅನೇಕ ದೇವತೆಗಳು ನೆಲೆಸಿವೆಯೆಂಬ ಪ್ರತೀತಿ ಇದೆ. ಅದರಲ್ಲಿ ಮಕ್ಕಳಿಗೆ ಕಿರುಕುಳ ಕೊಡುವ ಕುಚೇಷ್ಟೆಯ ಭೂತದ ರೋಚಕವಾದ ಕಥೆಯೊಂದಿದೆ.
    ಪ್ರತೀ ವರ್ಷ ಜಾತ್ರೆ ನಡೆಯುವಾಗ ಈ ಭೂತವು ಮಕ್ಕಳು-ಮರಿಗಳಿಗೆ ಕಿರುಕುಳ ಕೊಟ್ಟು ಖುಷಿಪಡುತ್ತಿತ್ತಂತೆ. ಇದನ್ನು ಗಮನಿಸಿದ ಜೇನುಕಲ್ಲಮ್ಮ ಒಂದು ಉಪಾಯ ಮಾಡಿದಳಂತೆ.
    ವರ್ಷದ ಜಾತ್ರೆ ಬರುವ ಮುನ್ನ ಆಕೆಯು ಆಭೂತವನ್ನು ಕರೆದು ಅದಕ್ಕೆ ಸಾಣಿಗೆಯೊಂದನ್ನು ನೀಡಿ ಬೆಟ್ಟದ ಕೆಳಗೆ ಹೋಗಿ ಸ್ನಾನಕ್ಕೆಂದು ನೀರು ತಾ ಎಂದು ಆದೇಶಿಸುತ್ತಾಳಂತೆ. ಆ ಭೂತವು ಸಾಣಿಗೆಯಲ್ಲಿ ನೀರನ್ನು ಮೊಗೆದು ತಲೆಯ ಮೇಲಿಟ್ಟುಕೊಂಡು ಬಂದು ಹೆಜ್ಜೆ ಇಡುವ ಮುನ್ನವೇ ನೀರೆಲ್ಲ ಸೋರುತ್ತದಾದ್ದರಿಂದ ಪುನಃ ಪುನಃ ಶ್ರದ್ಧೆಯಿಂದ ಪ್ರಯತ್ನವನ್ನು ಮಾಡುತ್ತಲೇ ಇರುತ್ತದಂತೆ. ಹೀಗೆ ಜಾತ್ರೆ ಮುಗಿಯುವವರೆಗೆ ಈ ಪ್ರಹಸನ ನಡೆದು, ಜಾತ್ರೆ ಮುಗಿದ ನಂತರ ಅಮ್ಮ ಅದಕ್ಕೆ ನೀರು ಬೇಡಬಾ ಎಂದು ಕರೆದು ವಿಶ್ರಾಂತಿಗೆ ಕಳಿಸುತ್ತಾಳಂತೆ..!
ಶಿಷ್ಟದೇವತೆಯಾಗಿ
    ಮಲೆನಾಡಿನ ಮೂಲ ನಿವಾಸಿಗಳು ಮೂಲತಹ ದ್ರಾವಿಡ ಮೂಲದ ಕಾಡು ಜನಾಂಗ ಅದರಲ್ಲೂ ಇಲ್ಲಿನ ಬಹುಸಂಖ್ಯಾತರಾದ ದೀವರು ಕಾಡು ಉತ್ಪತ್ತಿಯನ್ನೇ ಬಳಸಿ ಬದುಕುಕಟ್ಟಿಕೊಂಡರು. ಬೇಟೆ ಇವರ ಸಂಪ್ರದಾಯಿಕ ಕ್ರೀಡೆ ಹಾಗೂ ಕೃಷಿ ಮೂಲ ಕಸುಬಾಗಿದ್ದಿತ್ತು. ಉಪ ಕಸುಬಾಗಿ ಬೈನೆಮರದ ಕಳ್ಳು ಮಾರುವುದು ಸಹ ರೂಢಿಯಲ್ಲಿತ್ತು.
    ದ್ರಾವಿಡ ಜನಾಂಗದವರು ಅಥವಾ ಯಾವುದೇ ಪ್ರದೇಶದ ಮೂಲನಿವಾಸಿಗಳು ಸಹಜವಾಗಿಯೇ ಪ್ರಕೃತಿ ದೇವಾರಾದಕರು. ಸ್ಥಳ ಮಹಿಮೆಯುಳ್ಳ ಕಲ್ಲನ್ನೇ, ಮರವನ್ನೇ, ಬೆಟ್ಟವನ್ನೋ ಪರಂಪರಾಗತವಾಗಿ ಪೂಜಿಸುತ್ತಾ ಬಾಳಿಗೊಂಡು ನೆಲೆ ಕಂಡುಕೊಂಡವರು. ಅಂತೆಯೇ ’ಪ್ರಕೃತಿಯಾರಾಧನೆಯೇ ಪರಮನಾರಾಧನೆ’ಎಂದು ತಮ್ಮ ಜೈವಿಕ ಪರಿಸರದಲ್ಲಿಯೇ ಪ್ರಕೃತಿಯೊಡಲಲ್ಲಿ ಪುನೀತವಾದ ಬೆಟ್ಟದ ನೆತ್ತಿಯಲ್ಲಿ ತಮ್ಮ ಜಗನ್ಮಾಥೆಯನ್ನು ಕಂಡರಸಿ ಪೂಜಿಸುತ್ತಾ ಸಂಪೂರ್ಣ ಕನ್ನಡಮಯವಾದ ಅನ್ವರ್ಥನಾಮ ’ಜೇನುಕಲ್ಲಮ್ಮ’ಎಂಬ ಹೆಸರಿಟ್ಟು ಆರಾಧಿಸಿದರು.
    ಆದರೆ, ಭಾರತೀಯ ಮುಗ್ಧ ಮನಸ್ಸುಗಳು ಕಾಲಾಂತರದಿಂದಲೂ ’ಬ್ರಾಹ್ಮಣೋತ್ತರಿಂದಲೇ ಪೂಜೆ ಮಾಡಿಸಿದರೆ ಶ್ರೇಷ್ಠ’ಎಂದು ನಂಬಿಕೊಂಡು ಬಂದಿರುವುದು ಈಗ ಇತಿಹಾಸ.
ಅದಕ್ಕನುಗುಣವಾಗಿಯೇ ಅಂದಿನ ದೀವರನಾಯಕನೊಬ್ಬ ಬೇಟೆಯ ಕಾಯಕದಲ್ಲಿ ಕಂಡುಕೊಂಡ ಈಪ್ರಕೃತಿ ದೇವಿ ಕನ್ನಡಮಯ ಆದಿಶಕ್ತಿಯಾದ ಜೇನುಕಲ್ಲಮ್ಮನ ಪೂಜೆಗಾಗಿ ಬ್ರಾಹ್ಮಣರನ್ನು ನೇಮಿಸಿಕೊಂಡ. ತಾವೆಲ್ಲಾ ದೂರದಿಂದಲೇ ನಿಂತು ಭಯಭಕ್ತಿಯಿಂದ ನಮಿಸಿ ಕಾಣಿಕೆ ಒಪ್ಪಿಸಿ ದವಸಧಾನ್ಯ ನೀಡಿ, ಉಡಿ ತುಂಬಿ ಧನ್ಯತೆಯನ್ನು ಕಂಡುಕೊಂಡರು ಮತ್ತು ತಾವೆಲ್ಲಾ ಜೇನುಕಲ್ಲಮ್ಮನ ಮಕ್ಕಳೆಂದೇ ಭಾವಿಸಿ ಬೀಗಿದರು.
    ಆದರೆ, ಬರಬರುತ್ತಾ ಈಗಿನ ಬ್ರಾಹ್ಮಣಪೂಜೆಯ ಪ್ರತಿಫಲವಾಗಿ, ನಿಧಾನವಾಗಿ ದೇವತಾ ಸನ್ನಿಧಾನ ಶಿಷ್ಟರೂಪಪಡೆದು ಬದಲಾಗತೊಡಗಿದೆ. ಬ್ರಾಹ್ಮಣರು ಆಕೆಯನ್ನು ಕ್ಷುದ್ರದೇವತೆಯಾಗಿಯೇ ಭಾವಿಸಿ ಪೂಜಿಸುತ್ತಾರೆ. ಈಕೆಗೆ ಹಣ್ಣುಕಾಯಿ ಒಪ್ಪಿಸಿ ಕೈ ಮುಗಿಯುತ್ತಾರಾದರೂ ತಮ್ಮ ಕುಲದೈವವೆಂದು ಒಪ್ಪಲು ತಯಾರಿಲ್ಲ.
    ಸಹಸ್ರಮಾನಗಳ ಮೊದಲು ಹರಕೆ ಹಾಡ್ಯಗಳಲ್ಲಿ ಕೋಳಿಕುರಿಗಳನ್ನುಸಹ ದೇವಿಗೆ ಒಪ್ಪಿಸುವ ಪರಿಪಾಠವಿತ್ತು ಈಗ ಅದು ಕ್ರಮೇಣ ಮರೆಯಾಗಿ ದೇವಿಯನ್ನು ಸಸ್ಯಾಹಾರಿ ಎಂದೇ ಬಿಂಬಿಸಲಾಗುತ್ತಿದೆ. ರಕ್ತ ಬಲಿ ಆಕೆಯ ಕೈಕೆಳಗಿನಗಣಗಳಿಗೆ ಎಂಬ ನೀತಿ ಪಾಠ ಹೇಳಲಾಗುತ್ತಿದೆ.
    ಇತ್ತೀಚಿನ ವರ್ಷಗಳವರೆಗೂ ಅಮ್ಮನ ಹೆಸರಿಗೆ ನೇರವಾಗಿ ರಕ್ತಬಲಿ ನೀಡಲಾಗುತ್ತಿತ್ತು. ಅದರಲ್ಲೂ ಅಮ್ಮನ ಹಬ್ಬ ಎಂಬ ವಿಶೇಷವಾದ ಹಬ್ಬವೊಂದನ್ನು ಆಚರಿಸುವಾಗ ಟನ್ನುಗಟ್ಟಲೆ ಮಾಂಸದ ಖಾದ್ಯಗಳನ್ನು ತಯಾರಿಸಿ ರಾಶಿಹಾಕಿ ಅಮ್ಮನಿಗೊಪ್ಪಿಸಿ ಪೂಜೆಸಲ್ಲಿಸಿ ಸಾಮೂಹಿಕವಾಗಿ ಊಟಮಾಡಲಾಗುತ್ತಿತ್ತು. ಆ ರಾಶಿ ಅಕ್ಷಯವಾಗಿ ಅರಳುತ್ತದೆ ಎಂದು ನಂಬಿಕೆಯಿತ್ತು. ಆದರೆ ಇಂದು ಅವೆಲ್ಲವೂ ಮರೆಯಾಗುತ್ತಿದೆ.
ಪ್ರಕೃತಿ ದೇವಿಯಾಗಿ ಅಮ್ಮ
    ಪ್ರಕೃತಿಯೇ ಎಲ್ಲರ ಅಮ್ಮ-ದೇವತೆ. ಈ ನಮ್ಮ ತಾಯಿ ವನದೇವತೆ..! ವನವೇ ಎಲ್ಲಾ ಮಾನವರ ಮೂಲವೂ ಹೌದು. ಅದು ವೈಜ್ನಾನಿಕ ಸತ್ಯ ಸಹಾ ಹೌದು.
    ಜಗತ್ತಿನಾದ್ಯಂತ ಮಾತೃ ದೇವತೆಯನ್ನು – ಶಕ್ತಿದೇವತೆಯನ್ನು ಆರಾಧಿಸಲಾಗುತ್ತಿದೆ. ಈ ಎಲ್ಲಾ ದೇವಿಯರಿಗೂ ಜನರು ತಮಗೆ ತೋಚಿದ ಒಂದೊಂದು ಹೆಸರನ್ನಿಟ್ಟು ಭಾವುಕರಾಗಿ ಪೂಜಿಸುತ್ತಾರೆ. ಆದರೆ ನಮ್ಮ ಮಲೆನಾಡಿನ ಮುಗ್ಧರು ಈ ಅಧಿದೇವತೆಗೆ ಯಾವುದೇ ಒಂದು ಅಂಕಿತನಾಮವನ್ನೇ ಇಡಲಿಲ್ಲ. ಬದಲಿಗೆ ಅಮ್ಮ ಎಂದೇ ಕರೆದರು. ಆಕೆಯ ಶಕ್ತಿ ಸ್ಥಳವನ್ನು ಅಮ್ಮನಘಟ್ಟ ಎಂದರು. ಆಕೆಯ ಹಬ್ಬವನ್ನು ಅಮ್ಮನ ಹಬ್ಬಎಂದರು, ಏಕೆ ಗೊತ್ತೇ? ಈ ದೇವಿಯನ್ನು ಪೂಜಿಸುವವರು ಭಕ್ತರಲ್ಲ... ಅವರೆಲ್ಲ ಆಕೆಯ ಒಡಲಲ್ಲಿ ಜನಿಸಿದ ಸ್ವಂತ ಮಕ್ಕಳು ಅದಕ್ಕೆ..!!

Copyright 2020 www.jenukallamma.com  Inc. All Rights Reserved.
ದೇವೀ ಹಿನ್ನೆಲೆ
Designed by Invance Infotech, Shimoga.
  ನೂತನ ದೇವಾಲಯದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ